ಪ್ರಪಂಚದ ಆರ್ಥಿಕ ಮುಗ್ಗಟ್ಟು

 	1929-35ರ ಅವಧಿಯಲ್ಲಿ ಪ್ರಪಂಚದ ಅರ್ಥವ್ಯವಸ್ಥೆಗಳಲ್ಲಿ ವ್ಯಾಪಕವಾಗಿ ಸಂಭವಿಸಿದ ಆರ್ಥಿಕ ಮುಗ್ಗಟ್ಟು. ಈ ಕಾಲದಲ್ಲಿ ನಿರುದ್ಯೋಗ ತೀವ್ರವಾಗಿ ಏರಿತು. ಆರ್ಥಿಕ ಚಟುವಟಿಕೆಗಳು ಜಡವಾದುವು. ಇದಕ್ಕೆ ಹಿಂದೆ ಯಾವಾಗಲೂ ಪ್ರಪಂಚ ಇಷ್ಟು ದೀರ್ಘಾವಧಿಯ ಮತ್ತು ಇಷ್ಟು ವ್ಯಾಪಕವಾದ ಆರ್ಥಿಕ ಮುಗ್ಗಟನ್ನು ಅನುಭವಿಸಿಯೇ ಇರಲಿಲ್ಲ. ಮತ್ತೆ ಇದುವರೆಗೂ ಅಂಥ ಮುಗ್ಗಟ್ಟು ಸಂಭವಿಸಿಲ್ಲ. ಆದ್ದರಿಂದಲೇ ಇದನ್ನು ಮಹಾ ಆರ್ಥಿಕ ಮುಗ್ಗಟ್ಟೆಂದು ಹೇಳಲಾಗುತ್ತದೆ.

	ಪ್ರಪಂಚದ ಆರ್ಥಿಕ ಮುಗ್ಗಟ್ಟು ಆರಂಭವಾದ್ದು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ 1929ರಲ್ಲಿ. ಅನಂತರ ಇದು ಕ್ರಮ ಕ್ರಮವಾಗಿ ಪ್ರಪಂಚದ ಬಹುತೇಕ ಎಲ್ಲ ರಾಷ್ಟ್ರಗಳಿಗೂ ಪಸರಿಸಿತು. ಆರ್ಥಿಕ ಮುಗ್ಗಟ್ಟಿನ ತೀವ್ರ ಪರಿಣಾಮಗಳನ್ನು ಎದುರಿಸಿದ ರಾಷ್ಟ್ರ ಅಮೆರಿಕ ಸಂಯುಕ್ತ ಸಂಸ್ಥಾನ.

	ಪ್ರಪಂಚದ ಆರ್ಥಿಕ ಮುಗ್ಗಟ್ಟಿಗೆ ನಿಜವಾಗಿದ್ದ ಕಾರಣಗಳು ಯಾವುವು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ ಅರ್ಥ ವಿಜ್ಞಾನಿಗಳು ಕೆಲವು ಮುಖ್ಯ ಕಾರಣಗಳನ್ನು ಗುರುತಿಸಿದ್ದಾರೆ.

	1. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ 1920-29ರ ನಡುವೆ ಉಂಟಾದ ಉದರಿ ಬಾಹುಳ್ಯ ಮತ್ತು ಹಣದ ಪರಿಚಲನೆಯ ವೇಗದಲ್ಲಿ ಉಂಟಾದ ಹೆಚ್ಚಳ. ನೈಜ ವಾಣಿಜ್ಯ ವ್ಯವಹಾರಗಳಿಗಿಂತಲೂ ಹಣದ ಬಾಹುಳ್ಯ ಅಧಿಕವಾಗಿದ್ದುದರಿಂದ ಇದು ಆರ್ಥಿಕ ಮುಗ್ಗಟ್ಟಿಗೆ ಎಡೆ ಕೊಟ್ಟಿತು. ಹಣದ ಪರಿಚಲನೆಯ ವೇಗ ಅರ್ಥವ್ಯವಸ್ಥೆಯನ್ನು ಮುಗ್ಗಟ್ಟಿನ ಘಟ್ಟಕ್ಕೆ ತಳ್ಳಲು ಹಣದ ಪರಿಚಲನೆಯ ವೇಗದಿಂದ ಪೋಷಣೆ ದೊರಕಿತು.

	2. ಕೊರತೆ ಅನುಭೋಗ ಇನ್ನೊಂದು ಕಾರಣ. ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ 1929ರ ವರೆಗೆ ನಡೆದಿದ್ದ ಆತ್ಯಧಿಕ ಪ್ರಮಾಣದ ಹಣದ ಹೂಡಿಕೆಗೆ ಸಮನಾಗಿ ಅನುಭೋಗ ಬೆಳೆಯದೇ ಹೋದ್ದೂ ಆರ್ಥಿಕ ಮುಗ್ಗಟ್ಟಿನ ಕಾರಣವಾಯಿತು.

	3. ಹೂಡಿಕೆಗೆ ಇದ್ದ ಅವಕಾಶಗಳು 1929ರ ವೇಳೆಗೆ ತಾತ್ಕಾಲಿಕವಾಗಿ ಕೊನೆಗೊಂಡಂತೆ ಭಾಸವಾಯಿತು. 1929ರಿಂದ ಹೂಡಿಕೆಯ ಪ್ರಮಾಣ ಕಡಿಮೆಯಾಗುತ್ತ ಬಂದವು.

	4. ಬ್ಯಾಂಕಿಂಗ್ ವ್ಯವಸ್ಥೆಯ ಅಲ್ಲೋಲ-ಕಲ್ಲೋಲವೂ ಮುಗ್ಗಟ್ಟಿಗೆ ಕಾರಣವಾಯಿತು. ಕೃಷಿಸರಕುಗಳ ಮತ್ತು ಪ್ರತಿಭೂತಿಗಳ (ಸೆಕ್ಯೂರಿಟಿ) ಬೆಲೆಗಳು ಕುಸಿದುದರಿಂದ ಬ್ಯಾಂಕುಗಳ ದ್ರವ್ಯತೆ ತುಂಬ ಕಡಿಮೆಯಾಯಿತು. ಹೀಗಾಗಿ ಬ್ಯಾಂಕುಗಳು ತಮ್ಮ ಪಾವತಿಗಳನ್ನು ರದ್ದು ಮಾಡಿದವು. ಇದು ಮುಗ್ಗಟ್ಟಿಗೆ ಎಡೆಮಾಡಿಕೊಟ್ಟಿತು.

	5. ಕೂಲಿ ನೀತಿಯೂ ಮುಗ್ಗಟ್ಟಿನ ಕಾರಣವಾಯಿತು. 1930ರಿಂದ ಕೂಲಿಗಳು ಕೆಳಗಿಳಿಯ ತೊಡಗಿದವು. ಈ ಇಳಿತ ಮುಗ್ಗಟ್ಟಿಗೆ ಪ್ರಚೋದನೆ ನೀಡಿದ್ದಲ್ಲದೆ ಅದನ್ನು ಪೋಷಿಸಿತು.

	6. ಷೇರು ಪೇಟೆಯಲ್ಲಿ ಬೆಲೆಗಳು 1929ರ ಅಕ್ಟೋಬರ್‍ನಿಂದ ಕುಸಿಯುವುಕ್ಕೆ ಪ್ರಾರಂಭಿಸಿದವು. ಈ ಬೆಲೆ ಕುಸಿತ ಅಮೆರಿಕದ ಜನರ ಆರ್ಥಿಕ ಚೈತನ್ಯವನ್ನೇ ಕುಗ್ಗಿಸಿತು. ಅವರ ಹೂಡಿಕೆಗಳ ಮೇಲಿನ ಲಾಭ ಕುಸಿಯತೊಡಗಿತು. ಇದು ಮುಗ್ಗಟ್ಟಿಗೆ ಕಾರಣವಾಯಿತು.

	7. ಇನ್ನೊಂದು ಪ್ರಬಲ ಅಂಶವೆಂದರೆ, ಕೃಷಿ ಸರಕುಗಳ ಮತ್ತು ಕಚ್ಚಾ ಸಾಮಗ್ರಿಗಳ ಬೆಲೆಗಳ ಕುಸಿತ. ಈ ಬೆಲೆಗಳು ಬಹುಕಾಲ ಚೇತರಿಸಿಕೊಳ್ಳಲಿಲ್ಲ. ಮುಗ್ಗಟ್ಟು ತೀವ್ರಗೊಳ್ಳಲು ಇದೂ ಕಾರಣವಾಯಿತು.

	ಮೇಲಿನ ಕಾರಣಗಳು ಒಟ್ಟಾಗಿ ಪ್ರಪಂಚದ ಆರ್ಥಿಕ ಮುಗ್ಗಟ್ಟು ಉಂಟಾಯಿತೆಂದು ಸಾಮಾನ್ಯವಾಗಿ ಅಭಿಪ್ರಾಯ ಪಡಲಾಗುತ್ತದೆ. ಗುರುತಿಸಲಾಗದಿರುವ ಇನ್ನೂ ಅನೇಕ ಕಾರಣಗಳಿವೆಯೆಂದೂ ಅದರ ಬಗ್ಗೆ ವ್ಯಾಪಕ ಸಂಶೋಧನೆ ಅಗತ್ಯವೆಂದೂ ಇಂದಿಗೂ ಅನೇಕ ಅರ್ಥ ವಿಜ್ಞಾನಿಗಳ ಅಭಿಪ್ರಾಯ.

	ಆರ್ಥಿಕ ಮುಗ್ಗಟ್ಟಿನ ಕಾರಣಗಳೇನೇ ಇರಲಿ, ಇದರಿಂದ ಅಮೆರಿಕ ಸಂಯುಕ್ತ ಸಂಸ್ಥಾನದ ಅರ್ಥವ್ಯವಸ್ಥೆಯ ಮೇಲೆ ಹಾಗೂ ವಿಶ್ವದ ಇತರ ಎಲ್ಲ ರಾಷ್ಟ್ರಗಳ ಮೇಲೆ ಉಂಟಾದ ಆರ್ಥಿಕ ಪರಿಣಾಮ ತೀವ್ರ ಸ್ವರೂಪದ್ದಾಗಿತ್ತು.

	ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ 1929ರ ಮತ್ತು 1934ರ ನಡುವೆ ಕೃಷಿ ಹಾಗೂ ಬಂಡವಾಳ ಸರಕುಗಳ ಉತ್ಪಾದನೆ ತೀವ್ರವಾಗಿ ಕಡಿಮೆಯಾಯಿತು. 1929ನ್ನು ಆಧಾರ ವರ್ಷವಾಗಿಟ್ಟುಕೊಂಡರೆ, ಕೃಷಿ ಸರಕು ಉತ್ಪಾದನೆಯ ಸೂಚ್ಯಂಕ 1934ರಲ್ಲಿ 87ಕ್ಕೂ ಬಂಡವಾಳ ಸರಕುಗಳ ಉತ್ಪಾದನೆಯ ಸೂಚ್ಯಂಕ 50ಕ್ಕೂ ಇಳಿದವು. (ಆಧಾರ ವರ್ಷ 1929) ಆರ್ಥಿಕ ಮುಗ್ಗಟ್ಟಿನ ತೀವ್ರತೆಯನ್ನು ತಡೆದುಕೊಳ್ಳಲಾರದೆ ಅನೇಕ ವಾಣಿಜ್ಯ ಬ್ಯಾಂಕುಗಳು ಮುಚ್ಚಲ್ಪಟ್ಟವು. 1930, 1931 ಮತ್ತು 1932ರಲ್ಲಿ 5,096 ಬ್ಯಾಂಕುಗಳು ತಮ್ಮ ಪಾವತಿಗಳನ್ನು ರದ್ದು ಪಡಿಸಿದವು. 1929ಮತ್ತು 1932ರ ನಡುವೆ ಅಮೆರಿಕದ ರಾಷ್ಟ್ರೀಯ ವರಮಾನ ಶೇ 38ರಷ್ಟು ಕಡಿಮೆಯಾಯಿತು. ಈ ಅವಧಿಯಲ್ಲಿ ನಿರುದ್ಯೋಗಿಗಳ ಸಂಖ್ಯೆ 1.5 ಕೋಟಿ ಏರಿತು.

	ಅಮೆರಿಕ ಸಂಯುಕ್ತ ಸಂಸ್ಥಾನಗಳೊಡನೆ ಪ್ರಪಂಚದ ಬಹುತೇಕ ಎಲ್ಲ ರಾಷ್ಟಗಳೂ ನೇರವಾಗಿ ಅಥವಾ ಪರೋಕ್ಷವಾಗಿ ಆರ್ಥಿಕ ಸಂಬಂಧಗಳನ್ನು ಇಟ್ಟುಕೊಂಡಿದ್ದುದರಿಂದ ಅವುಗಳೆಲ್ಲದರ ಮೇಲೆ ಆರ್ಥಿಕ ಮುಗ್ಗಟ್ಟಿನ ಪರಿಣಾಮ ಅನಿವಾರ್ಯವಾಗಿ ಉಂಟಾಯಿತು. 1929ರ ವೇಳೆಗೆ ಅಮೆರಿಕ ಸಂಯುಕ್ತ ಸಂಸ್ಥಾನ ಅಂತರರಾಷ್ಟ್ರೀಯ ಮಟ್ಟದಲ್ಲಿ ಆತ್ಯಂತ ಮುಖ್ಯವಾದ ಅರ್ಥವ್ಯವಸ್ಥೆಯಾಗಿತ್ತು. ಉದಾಹರಣೆಗೆ ವರ್ಷದಲ್ಲಿ ವಿಶ್ವದ 24 ಅತಿಮುಖ್ಯ ಕೈಗಾರಿಕಾ ಉತ್ಪಾದನ ರಾಷ್ಟ್ರಗಳಲ್ಲಿಯ ಒಟ್ಟು ಉತ್ಪಾದನೆಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ಶೇ 46ರಷ್ಟನ್ನು ಉತ್ಪಾದಿಸುತ್ತಿತ್ತು. 1929ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ಆಮದು ಮತ್ತು ಪ್ರಪಂಚದ ಇತರ ರಾಷ್ಟ್ರಗಳಿಗೆ ಮಾಡಿದ ಪಾವತಿ 740 ಕೋಟಿ ಡಾಲರ್. 1932ರಲ್ಲಿ ಇದರಲ್ಲಿ ಶೇ. 32ರಷ್ಟು ಇಳಿತಾಯವಾಗಿತ್ತು. ಅಮೆರಿಕದ ಆಮದು ಕಡಿಮೆಯಾದುದರಿಂದ ಇತರ ರಾಷ್ಟ್ರಗಳಲ್ಲಿ ಉತ್ಪಾದನೆಯ ಇಳಿತಾಯವೂ ನಿರುದ್ಯೋಗದ ಏರಿಕೆಯೂ ಅನಿವಾರ್ಯವಾಯಿತು. ಅಮೆರಿಕಕ್ಕೆ ರಫ್ತು ಮಾಡುತ್ತಿದ್ದ ದೇಶಗಳಲ್ಲೂ ಇದರಿಂದ ಆರ್ಥಿಕ ಮುಗ್ಗಟ್ಟು ಸಂಭವಿಸಿತು. ಆರ್ಥಿಕ ಮುಗ್ಗಟ್ಟಿನಿಂದಾಗಿ ಅಂತರರಾಷ್ಟ್ರೀಯ ವ್ಯಾಪಾರದ ಗಾತ್ರ ಕುಗ್ಗಿತು. ಪ್ರಪಂಚದ 1929-1937ರ ಉತ್ಪಾದನೆ ಮತ್ತು ವಿಶ್ವವಾಣಿಜ್ಯವನ್ನು ಪಟ್ಟಿ 1ರಲ್ಲಿ ಕೊಡಲಾಗಿದೆ.
ಪಟ್ಟಿ 1. 1929-37ರಲ್ಲಿ ಪ್ರಪಂಚದ ಉತ್ಪಾದನೆ ಮತ್ತು ವಾಣಿಜ್ಯ

1929
1932
1936

ಆಹಾರ ಸರಕುಗಳು

ಉತ್ಪಾದನೆ
...
100
100
108

ವಾಣಿಜ್ಯ
...
100
89
93.5

ಕಚ್ಚಾಸಾಮಗ್ರಿ

ಉತ್ಪಾದನೆ
...
100
74
116

ವಾಣಿಜ್ಯ
...
100
81.5
108

ಕೈಗಾರಿಕೆ

ಉತ್ಪಾದನೆ
...
100
70
120

ವಾಣಿಜ್ಯ
...
100
59.5
87

	ಪ್ರಪಂಚದ ಆರ್ಥಿಕ ಮುಗ್ಗಟ್ಟಿನ ಮತ್ತೊಂದು ಮುಖ್ಯ ಪರಿಣಾಮವೆಂದರೆ ಎಲ್ಲ ರಾಷ್ಟ್ರಗಳೂ ವ್ಯಾಪಾರದಲ್ಲಿ ಸಂರಕ್ಷಣೆಯ ನೀತಿಯನ್ನು ಅನುಸರಿಸಿದ್ದು ತನ್ನ ದೇಶದ ಮೇಲೆ ಆಹಾರ ಸರಕುಗಳ ಬೆಲೆ ಇಳಿತಾಯದ ಪರಿಣಾಮವನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಪ್ರತಿಯೊಂದು ಸರಕಾರವೂ ಈ ನೀತಿ ಅನುಸರಿಸಿತು. ಆಮದು ತೆರಿಗೆ, ಆಮದು ಪಡಿತರ, ವಿದೇಶಿ ವಿನಿಮಯದರ ನಿಯಂತ್ರಣ ಇವು ಸಾಮಾನ್ಯವಾದುವು.

	ಆರ್ಥಿಕ ಮುಗ್ಗಟ್ಟಿನ ಪರಿಣಾಮ ಪ್ರಪಂಚದ ಎಲ್ಲ ದೇಶಗಳ ಉತ್ಪಾದನೆಯ ಮೇಲೆ ಉಂಟಾದರೂ ಅದು ಎಲ್ಲ ದೇಶಗಳ ಮೇಲೂ ಒಂದೇ ರೀತಿಯಾಗಿರಲಿಲ್ಲ. ಈ ಮುಂದೆ 1932ರ ಉತ್ಪಾದನೆ ಸೂಚ್ಯಂಕವನ್ನು (ಆಧಾರ ವರ್ಷ 1929) ಕೊಟ್ಟಿದೆ.

ಪಟ್ಟಿ 2
ರಷ್ಯ
...
183
ಫ್ರಾನ್ಸ್
72

ಜಪಾನ್
...
98
ಬೆಲ್ಜಿಯಮ್
68

ನಾರ್ವೇ
...
93
ಇಟಲಿ
67

ಸ್ವೀಡನ್
...
89
ಚೆಕೊಸ್ಲೊವಾಕಿಯ
65

ಹಾಲೆಚಿಡ್
...
84
ಪೋಲೆಂಡ್
63

ಗ್ರೇಟ್ ಬ್ರಿಟನ್
...
84
ಕೆನಡ
58

ರುಮೇನಿಯಾ
...
82
ಜರ್ಮನಿ
53

ಹಂಗೇರಿ
...
82
ಅಮೆರಿಕ ಸಂಯುಕ್ತ ಸಂಸ್ಥಾನಗಳು
53

	ರಷ್ಯಕ್ಕೆ ಆರ್ಥಿಕ ಮುಗ್ಗಟ್ಟಿನಿಂದ ಯಾವ ಪರಿಣಾಮವೂ ಉಂಟಾಗಲಿಲ್ಲವೆಂಬುದು ಮೇಲಿನ ಅಂಕಿಗಳಿಂದ ವ್ಯಕ್ತಪಡುತ್ತದೆ. ಜಪಾನ್ ಹಣದುಬ್ಬರ ನೀತಿಯನ್ನು ಅನುಸರಿಸಿದುದರಿಂದ ಮುಗ್ಗಟ್ಟಿನ ತೀವ್ರ ಪರಿಣಾಮಗಳನ್ನು ತಪ್ಪಿಸಿಕೊಂಡಿತು. ಸ್ಕ್ಯಾಂಡಿನೇವಿಯನ್ ರಾಷ್ಟ್ರಗಳೂ ಕಚ್ಚಾಸಾಮಗ್ರಿಯ ಆಮದನ್ನು ಸಂರಕ್ಷಿಸಿಕೊಳ್ಳುವುದರ ಮೂಲಕ ಆರ್ಥಿಕ ಮುಗ್ಗಟ್ಟಿನ ತಾಪವನ್ನು ತಪ್ಪಿಸಿಕೊಂಡವು. ಆದರೆ ಅಮೆರಿಕ ಸಂಯುಕ್ತ ಸಂಸ್ಥಾನ, ಕೆನಡ, ಜರ್ಮನಿ, ಆಸ್ಟ್ರಿಯ, ಪೋಲೆಂಡ್, ಜೆಕೊಸ್ಲೊವಾಕಿಯ, ಇಟಲಿ, ಫ್ರಾನ್ಸ್, ಬೆಲ್ಜಿಯಮ್ ಇವು ಆರ್ಥಿಕ ಮುಗ್ಗಟ್ಟಿನ ತೀವ್ರ ಪರಿಣಾಮವನ್ನು ಎದುರಿಸಬೇಕಾಯಿತು.

	ಪ್ರಪಂಚ ಆರ್ಥಿಕ ಮುಗ್ಗಟ್ಟಿನ ಮತ್ತೊಂದು ಪರಿಣಾಮವೆಂದರೆ ಎಲ್ಲ ರಾಷ್ಟ್ರಗಳೂ ಸುವರ್ಣ ಪ್ರಮಿತಿಯನ್ನು ತ್ಯಜಿಸಿದ್ದು. ಯೂರೋಪಿನ ಮುಖ್ಯ ರಾಷ್ಟ್ರಗಳು ಬ್ಯಾಂಕ್ ಆಫ್ ಇಂಗ್ಲೆಂಡಿನಿಂದ ಚಿನ್ನವನ್ನು ವಾಪಸ್ಸು ಪಡೆಯಲು ಪ್ರಾರಂಭಿಸಿದುದರಿಂದ ಸುವರ್ಣ ಪ್ರಮಿತಿಯನ್ನು ಮುಂದುವರಿಸಿಕೊಂಡು ಹೋಗುವುದು ಬ್ರಿಟನ್ನಿಗೆ ಕಷ್ಟವಾಯಿತು. ಅದು 1931ರಲ್ಲಿ ಸುವರ್ಣಪ್ರಮಿತಿಯನ್ನು ಬಿಟ್ಟಿತು. ಅನಂತರ ಕೆನಡ, ಭಾರತ, ಡೆನ್‍ಮಾರ್ಕ್, ಈಜಿಪ್ಟ್ ನಾರ್ವೆ ಮತ್ತು ಸ್ವೀಡನ್ ಇವೂ ಸುವರ್ಣ ಪ್ರಮಿತಿಯನ್ನು ಬಿಟ್ಟವು. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಹೇರಳವಾಗಿ ಚಿನ್ನವಿದ್ದುದರಿಂದ ಕೂಡಲೇ ಅದು ಸುವರ್ಣ ಪ್ರಮಿತಿಯನ್ನು ಬಿಡಲಿಲ್ಲ. 1933ರಲ್ಲಿ ಅದೂ ಸುವರ್ಣ ಪ್ರಮಿತಿಯನ್ನು ತ್ಯಜಿಸಿತು.

	ಚೇತರಿಕೆ: ಪ್ರಪಂಚದ ಮುಕ್ತ ಅರ್ಥವ್ಯವಸ್ಥೆಯ ರಾಷ್ಟ್ರಗಳಲ್ಲಿ 1932ರಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಚೇತರಿಕೆ ಪ್ರಾರಂಭವಾಯಿತು. ಆರ್ಥಿಕ ಮುಗ್ಗಟ್ಟಿಗೆ ಎಲ್ಲ ಕಾರಣಗಳು ಹೇಗೆ ತಿಳಿದಿಲ್ಲವೋ ಹಾಗೆಯೇ ಆರ್ಥಿಕ ಚೇತರಿಕೆಯನ್ನು ಪ್ರೇರೇಪಿಸಿದ ಕಾರಣಗಳು ಸ್ಪಷ್ಟವಾಗಿ ತಿಳಿದಿಲ್ಲ. ಆದರೂ ಕೇನ್ಸನ ನೀತಿಯಿಂದ ಪ್ರೇರಿತವಾಗಿ ರೂಸ್‍ವೆಲ್ಟ್ ಅನುಸರಿಸಿದ ಹೊಸ ಆರ್ಥಿಕ ನೀತಿಯಿಂದ ಚೇತರಿಕೆ ಉಂಟಾಯಿತೆಂದು, ಮತ್ತು ಎರಡನೆಯ ಮಹಾಯುದ್ಧ ಈ ಚೇತರಿಕೆಗೆ ಪೋಷಕವಾಯಿತೆಂದು ಸಾಮಾನ್ಯವಾಗಿ ಅಭಿಪ್ರಾಯಪಡಲಾಗಿದೆ.

	ಆರ್ಥಿಕ ಚೇತರಿಕೆಯನ್ನುಂಟುಮಾಡಲು ಅಮೆರಿಕ ಸಂಯುಕ್ತ ಸಂಸ್ಥಾನ ಸರಕಾರ ಆರ್ಥಿಕ ನೀತಿಯಲ್ಲಿ ಗಮನಾರ್ಹ ಬದಲಾವಣೆ ಮಾಡಿತು. ಸರ್ಕಾರ ಆರ್ಥಿಕ ಚಟುವಟಿಕೆಯಲ್ಲಿ ಕೈಹಾಕಬಾರದೆಂಬ ನೀತಿಯನ್ನು ಸಂಪೂರ್ಣವಾಗಿ ಕೈಬಿಡಲಾಯಿತು. ಬದಲಿಗೆ, ಸರ್ಕಾರ ಹೊಸ ಆರ್ಥಿಕ ನೀತಿಯ (ನ್ಯೂಡೀಲ್ ಪಾಲಿಸಿ) ಅನ್ವಯ, ಕೈಗಾರಿಕೆ, ಕೃಷಿ, ವಿದೇಶೀ ವಾಣಿಜ್ಯ ಮತ್ತು ಹಣಕಾಸು ಕ್ಷೇತ್ರಗಳನ್ನು ಪ್ರವೇಶಿಸಿತು. ಆರ್ಥಿಕ ಚೇತರಿಕೆಯನ್ನುಂಟು ಮಾಡಲು ಪ್ರತಿಯೊಂದು ಕ್ಷೇತ್ರದಲ್ಲೂ ಸರಕಾರ ವ್ಯಾಪಕವಾಗಿ ಹಣವನ್ನು ವೆಚ್ಚಮಾಡಿತು. ಅಮೆರಿಕಕ್ಕೆ ಇದು ಒಂದು ಹೊಸ ಪ್ರಯೋಗವಾಗಿತ್ತು.

	ಪ್ರಪಂಚದ ಆರ್ಥಿಕ ಮುಗ್ಗಟ್ಟಿನಿಂದ ರಾಷ್ಟ್ರಗಳ ಅನೇಕ ಪಾಠಗಳನ್ನು ಕಲಿತಿವೆ. ತಂತ್ರ ಅಥವಾ ಮುಕ್ತ ಆರ್ಥಿಕ ನೀತಿಯಿಂದಲೇ ಅರ್ಥವ್ಯವಸ್ಥೆ ಪೂರ್ಣೋದ್ಯೋಗದ ಕಡೆಗೆ ಸಾಗಲಾರದು; ಸರ್ಕಾರ ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ಆರ್ಥಿಕ ಪ್ರಗತಿ ಸುಗಮವಾಗಿ ನಡೆದುಕೊಂಡು ಹೋಗುವಂತೆ ಮಾಡಬಹುದು ಎಂಬ ನಂಬಿಕೆ ಬಲವಾಯಿತು. ಆರ್ಥಿಕ ಚಟುವಟಿಕೆಗಳಲ್ಲಿ ಸರಕಾರ ಪ್ರವೇಶಿಸುವುದರಿಂದ ದೀರ್ಘಾವಧಿಯ ಆರ್ಥಿಕ ಮುಗ್ಗಟ್ಟುಂಟಾಗುವಂತೆ ನೋಡಿಕೊಳ್ಳಬಹುದು ಎಂಬ ನಂಬಿಕೆ ಬೆಳೆಯಿತು. ಇದರಿಂದಲೋ ಎಂಬಂತೆ 1929ರಿಂದ ಇದುವರೆಗೆ ಅಂಥ ತೀವ್ರ ಆರ್ಥಿಕ ಮುಗ್ಗಟ್ಟು ಯಾವ ದೇಶದಲ್ಲೂ ಸಂಭವಿಸಿಲ್ಲ.
(ಸಿ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ